ಎಳಂದೂರು ಹರೀಶ್ವರ: 1606. ವೀರಶೈವ ಕವಿ. ಮೈಸೂರು ಜಿಲ್ಲೆಯ ಎಳಂದೂರು ಸಿಂಹಾಸನಾಧೀಶ್ವರನಾದ ಗುರು ಹರೀಶ್ವರದೇವರ ಮೊಮ್ಮ್ಮಗ, ತೋಂಟದಾರ್ಯನ ಮಗ. ಪ್ರಭುದೇವರ ಪುರಾಣ ಇವನ ಕಾವ್ಯ. ಇದು ವಿವಿಧ ಷಟ್ಪದಿಗಳಲ್ಲಿ ರಚಿತವಾಗಿದೆ. 9 ಸಂಧಿ, 1497 ಪದ್ಯಗಳಿರುವ ಈ ಕೃತಿಯಲ್ಲಿ ಅಲ್ಲಮ ಪ್ರಭುದೇವರ ಸಮಗ್ರಚರಿತ್ರೆ ನಿರೂಪಿತವಾಗಿದೆ. ಕಾವ್ಯದ ಬಂಧ ಪ್ರೌಢವಾಗಿದೆ. ಕವಿಯೇ ಇದನ್ನು ಪ್ರಾಸರತ್ನಾಕರ ಎಂದು ಕರೆದಿದ್ದಾನೆ. ಲೌಕಿಕ ಪಾರಮಾರ್ಥಿಕ ಉದಾಹರಣೆಗಳಿಂದ ಚರಿತ್ರೆಯನ್ನು ಅತ್ಯಂತ ರಸವತ್ತಾದ ಕಾವ್ಯವನ್ನಾಗಿ ಮಾಡಿದ್ದಾನೆ. ತನ್ನ ಗ್ರಂಥವನ್ನು ವಿಶ್ವಾವಸು ಜ್ಯೇಷ್ಠ ಶುದ್ಧ ಪಾಡ್ಯದಲ್ಲಿ ಆರಂಭಿಸಿ ಪರಾಭವ ಜ್ಯೇಷ್ಠ ಶುದ್ಧ ಬಹುಳ ದಶಮಿಯಲ್ಲಿ ಮುಗಿಸಿದಂತೆ ಹೇಳಿದ್ದಾನೆ. ಇದರಿಂದ ಈತನ ಕಾಲವನ್ನು ಸು. 1486 ಎಂದು ಕೆಲವರೂ ಸು. 1606 ಎಂದು ಮತ್ತೆ ಕೆಲವರೂ ಹೇಳುತ್ತಾರೆ.
ಕಾವ್ಯ ಪ್ರಾರಂಭದಲ್ಲಿ ಪರಮೇಶ್ವರ, ವೃಷಭ, ಭೃಂಗೀಶ, ವೀರಭದ್ರ, ಸೊನ್ನಲಿಗೆಯ ರಾಮ, ತೋಂಟದ ಸಿದ್ದಲಿಂಗಯತಿ, ಕೊಟ್ಟೂರಬಸವೇಶ್ವರ, ಗುರು ಸಿದ್ದವೇರ-ಇವರನ್ನು ಕವಿ ಸ್ತುತಿಸಿದ್ದಾನೆ. ತನ್ನ ಗುರುವಾದ ಸಿದ್ದವೀರೇಶ್ವರ ಪ್ರಭು ಕೃತಿಯನ್ನು ರಚಿಸಲು ಆಶೀರ್ವದಿಸಲೆಂದು ಬೇಡಿದ್ದಾನೆ. ಕಾವ್ಯಮಧ್ಯದಲ್ಲಿ ಕೆಲವೆಡೆ ತನ್ನನ್ನು ಹರೀಶ್ವರ ದೇವ, ಹರಿದೇವ, ಹರೀಶ್ವರಾಚಾರ್ಯ ಎಂದು ಕರೆದುಕೊಂಡಿದ್ದಾನೆ. ಪುರ್ವ ಕವಿಗಳಲ್ಲಿ ಕೆರೆಯ ಪದ್ಮರಸ, ಪಾಲ್ಕುರಿಕೆ ಸೋಮನಾಥ, ಪಂಡಿತದೇವ, ಗುಬ್ಬಿಯ ಮಲ್ಲಣ್ಣ, ಜಕ್ಕಣಾರ್ಯ, ಮಯೂರ, ಬಲ್ಲಟ, ಭವಭೂತಿ, ಬಿಲ್ಹಣ, ಮಲ್ಹಣ, ಹಂಪೆಯ ಹರಿದೇವ-ಇವರನ್ನು ಸ್ತುತಿಸಿದ್ದಾನೆ.	(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ